ದಸ್ಯುಗಳು -
ಋಗ್ವೇದದಲ್ಲಿ ಆರ್ಯರಿಗೂ ದಸ್ಯುಗಳಿಗೂ ನಡೆದ ಯುದ್ಧಗಳ ವರ್ಣನೆ ಬರುವುದರಿಂದ ಆರ್ಯರಿಗಿಂತ ಮೊದಲು ಈ ಜನರು ಭಾರತದಲ್ಲಿ ವಾಸಿಸುತ್ತಿದ್ದರೆಂದು ತಿಳಿಯುತ್ತದೆ. ಆರ್ಯರು ಬಣ್ಣದಲ್ಲಿ ಬಿಳಿಯವರಾದರೆ ದಸ್ಯುಗಳು ಕಪ್ಪು. ಆರ್ಯರು ಇಂದ್ರ, ಅಗ್ನಿ ಮುಂತಾದವರನ್ನು ಪೂಜೆ ಮಾಡುತ್ತಿದ್ದರೆ ದಸ್ಯುಗಳಿಗೆ ದೇವತೆಗಳಿರಲಿಲ್ಲ, ಯಜ್ಞಯಾಗಾದಿಗಳಿರಲಿಲ್ಲ. ಆದ್ದರಿಂದ ಆರ್ಯರಿಗೆ ಇವರನ್ನು ಕಂಡರೆ ತಿರಸ್ಕಾರ. ಧರ್ಮವಿಲ್ಲದವರು (ಅಕರ್ಮನ್) ದೇವರಿಲ್ಲದವರು (ಅದೇವಯು), ಯಜ್ಞವಿಲ್ಲದವರು (ಅಯಜ್ವನ್) ಕಟ್ಟಳೆಯಿಲ್ಲದವರು (ಅವ್ರತ) ಎಂದು ದಸ್ಯು ಜನರನ್ನು ನಿಂದಿಸುವ ಮಾತುಗಳು ಋಗ್ವೇದದಲ್ಲಿ ಮೇಲಿಂದ ಮೇಲೆ ಬರುತ್ತವೆ. ಮೂಗಿಲ್ಲದವರು (ಅನಾಸ್) ಎಂಬ ಉಕ್ತಿಯಂತೂ ಮಾರ್ಮಿಕವಾಗಿದೆ. ಇದರ ಮೇಲಿಂದ ದಸ್ಯುಗಳು ಚಪ್ಪಟೆ ಮೂಗಿನ ಗಿಡ್ಡ ದ್ರಾವಿಡರ ಬುಡಕಟ್ಟಿಗೆ ಸೇರಿದ್ದವರಿರಬಹುದೆಂದು ವಿದ್ವಾಂಸರು ಊಹಿಸುತ್ತಾರೆ. ಈ ಆದಿ ದ್ರಾವಿಡರಿಗೂ ಮೆಡಿಟರೇನಿಯನ್ ಪೂರ್ವನಿವಾಸಿಗಳಿಗೂ ಕೆಲವೊಂದು ಸಾಮ್ಯಗಳುಂಟು. ದಸ್ಯುಗಳ ಮಾತು ವಿಚಿತ್ರವಾಗಿತ್ತೆಂಬುದನ್ನು ಮೃಧ್ರ-ವಾಕ್ ಎಂಬ ವರ್ಣನೆಯೂ ಅವರು ವಿಚಿತ್ರ ಪೂಜೆಗಳನ್ನು ನಡೆಸುತ್ತಿದ್ದುದನ್ನು ಶಿಶ್ನದೇವಾಃ ಎಂಬ ಉಕ್ತಿಯೂ ಸಮರ್ಥಿಸುತ್ತವೆ. ಚುಮುರಿ, ಶಂಬರ, ಶುಷ್ಣ ಮುಂತಾದ ದಸ್ಯುವೀರರ ಉಲ್ಲೇಖವುಂಟು. ಆದರೆ ಋಗ್ವೇದದ ಆರ್ಯರ ಮುಂದೆ ಇವರ ಕೈ ನಡೆಯಲಿಲ್ಲ. ಇವರು ಸೋತು ದಾಸರಾದರು, ಇಲ್ಲವೇ ಗಿರಿವನಗಳಲ್ಲಿ ಅಡಗಿಕೊಂಡರು. ಇಂದಿಗೂ ಭಾರತದ ಕಾಡು ಜನರಲ್ಲಿ ಇವರ ಸಂತತಿಯನ್ನು ನೋಡಬಹುದು. 												(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ